ಉರಿಗಾಂ
ಕೋಲಾರ ಜಿಲ್ಲೆಯ ರಾಬರ್ಟ್‍ಸನ್ ಪೇಟೆಯ ಒಂದು ಭಾಗ. ಮೊದಲು ಪ್ರತ್ಯೇಕ ಹಳ್ಳಿಯಾಗಿತ್ತು. ಕೋಲಾರದ ಚಿನ್ನದ ಗಣಿಯ ಮೊಟ್ಟ ಮೊದಲ ಸುರಂಗ ತೋಡಿದ್ದು ಇಲ್ಲಿ. ಮುಂದಿನ ಹತ್ತು ವರ್ಷಗಳಲ್ಲಿ ಈ ಸುತ್ತಿನ ಪ್ರದೇಶವೆಲ್ಲ ಅಭಿವೃದ್ಧಿ ಹೊಂದಿ ಹೊಸರೂಪು ತಳೆಯಿತಲ್ಲದೆ ರಾಬರ್ಟ್‍ಸನ್ ಪೇಟೆಯೆಂಬ ಹೊಸನಗರ ಆವಿರ್ಭವಿಸಿದಾಗ ಅದರಲ್ಲಿ ಇದೂ ಲೀನವಾಯಿತು. ಉರಿಗಾಂಪೇಟೆ ಎಂದೂ ಇದನ್ನು ಕರೆಯುವ ವಾಡಿಕೆಯುಂಟು. ಇಲ್ಲೊಂದು ಪ್ರಥಮ ದರ್ಜೆಯ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು ಸ್ಥಾಪಿತವಾಗಿದೆ.
ಇತಿಹಾಸ ದೃಷ್ಟಿಯಿಂದಲೂ ಉರಿಗಾಂಗೆ ಪ್ರಾಶಸ್ತ್ಯವುಂಟು. ಹೊಯ್ಸಳ ದೊರೆ ರಾಮನಾಥನ (13ನೆಯ ಶತಮಾನ) ತಮಿಳು ಶಾಸನಗಳು ಇಲ್ಲಿವೆ. ಅವುಗಳ ಪ್ರಕಾರ ಇದರ ಹೆಸರು ಉರಿಗೈಯಂ.							

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ